
ಚಾಮರಾಜನಗರ :- ತಾಲೋಕಿನ ಕೊತ್ತಲವಾಡಿ ಬಳಿ ಕರಿಕಲ್ಲು ಗಣಿ ತ್ಯಾಜ್ಯ ಹಾಕಿರುವ ಪ್ರದೇಶದಲ್ಲಿ ಚಿರತೆಯ ಶವ ಪತ್ತೆ ಆಗಿದೆ. ಇದು ಸುಮಾರು 5 ವರ್ಷದ ಗಂಡು ಚಿರತೆಯಾಗಿದ್ದು, ವಿಷಪ್ರಾಷನದಿಂದ ಕಳೆದ ಮೂರು ದಿನಗಳ ಹಿಂದೆ ಪ್ರಾಣ ಕಳೆದುಕೊಂಡಿರಬಹುದೆಂದು ಶಂಕಿಸಲಾಗಿದೆ. ಇದಕ್ಕೆ ಪೂರಕವಾಗಿ ಸಮೀಪದಲ್ಲೇ ಕರುವಿನ ಅರ್ಧಂಬರ್ಧ ಕಳೇಬರ ಪತ್ತೆಯಾಗಿದೆ. ಕರುವನ್ನು ಚಿರತೆ ಕೊಂದಿರಬಹುದೆಂದೆ ಶಂಕಿಸಲಾಗಿದ್ದು ಕರುವಿನ ಮಾಲೀಕ ಕರುವಿನ ಮೃತದೇಹಕ್ಕೆ ವಿಷ ಸಿಂಪಡಿಸಿರುವ ಸಾಧ್ಯತೆಗಳು ಕಂಡು ಬಂದಿವೆ. ಸತ್ತು ಬಿದ್ದಿರುವ ಕರುವಿನ ಮಾಂಸಕ್ಕೆ ಆಕರ್ಷಿತ ಗ್ರಾಮದ ನಾಯಿ ಅದನ್ನು ತಿಂದು ಸಮೀಪವೇ ಸತ್ತು ಬಿದ್ದಿದೆ. ಕರುವನ್ನುಬೇಟೆಯಾಡಿದ ಚಿರತೆ ಒಮ್ಮೆ ತಿಂದು ಉಳಿದ ಮಾಂಸ ಭಕ್ಷಿಸಲು ಬಂದು ವಿಷಯುಕ್ತ ಮಾಂಸ ತಿಂದು ಹೆಣವಾಗಿ ಬಿದ್ದಿದೆ. ಮಹದೇಶ್ವರ ವನ್ಯಧಾಮದ ಹೂಗ್ಯಂ ಅರಣ್ಯ ವಲಯದ ಮೀಣ್ಯಂ ನ ಗಾಜನೂರು ಬೀಟ್ ನಲ್ಲಿ ಒಂದು ತಾಯಿ ಮತ್ತು ನಾಲ್ಕು ಮರಿಗಳು ವಿಷಪ್ರಾಷನ ದಿಂದ ಸತ್ತ ಸುದ್ದಿ ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸಿದ ಬೆನ್ನಿನಲ್ಲೇ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ 20 ಕೋತಿಗಳನ್ನು ಸಾಯಿಸಿ ತಂದು ಬಿಸಾಡಲಾಗಿತ್ತು ಇದೀಗ ಮತ್ತೊಂದು ಅಂತಹುದೇ ಘಟನೆ ನಡೆದಿದ್ದು ಆತಂಕ ಸೃಷ್ಟಿಸಿದೆ.
ಗಣಿಗಳಲ್ಲಿ ಚಿರತೆಗಳ ವಾಸ
ಕೊತ್ತಲವಾಡಿ ಸುತ್ತ ಮುತ್ತ ಹತ್ತಾರು ಕರಿಕಲ್ಲು ಗಣಿಗಳಿದ್ದು ಗಣಿ ತ್ಯಾಜ್ಯದ ಕಲ್ಲು ಬಂಡೆಗಳ ರಾಶಿ ಬೆಟ್ಟಗಳನ್ನೇ ಸೃಷ್ಟಿಸಿದೆ. ಇವು ಹುಲಿ ಚಿರತೆಗಳಿಗೆ ಹೇಳಿ ಮಾಡಿಸಿದ ಆವಾಸ ಸ್ಥಾನಗಳಾಗಿವೆ. ಬಂಡೀಪುರ, ತಮಿಳುನಾಡು ಅರಣ್ಯ ಪ್ರದೇಶಗಳು ಹತ್ತಿರ ಇವೆ. ಹಳ್ಳಿಗಳು ಅಕ್ಕಪಕ್ಕ ಇರುವುದರಿಂದ ಹಸು,ಕರು,ನಾಯಿ,ಕುರಿ ಮೇಕೆ ಬೇಟೆಯಾಡಲು ಅನುಕೂಲಕರವಾಗಿದೆ. ಇದೀಗ ಚಿರತೆಯ ಕಳೇಬರ ಸಿಕ್ಕಿರುವ ಕ್ವಾರೆ ಪ್ರದೀಪ್ ಎಂಬುವರಿಗೆ ಸೇರಿದೆ. ಇಲ್ಲಿ ರಾತ್ರಿ ಸಮಯದಲ್ಲಿ ಚಿರತೆಗಳ ಓಡಾಟ ಸರ್ವೇಸಾಮಾನ್ಯ. ಒಂದುವರೆ ವರ್ಷದ ಹಿಂದೆ ಇದೇ ಭಾಗದಲ್ಲಿ ಒಂದು ತಾಯಿ ಎರಡು ಹುಲಿ ಮರಿಗಳು ಸಂಶಯಾಸ್ಪದವಾಗಿ ಸಾವನ್ನಪ್ಪಿದವು. ಅವುಗಳ ಮರಣೋತ್ತರ ವರದಿ ಬಹಿರಂಗಗೊಂಡಿಲ್ಲ.ಸ್ವಾಭಾವಿಕ ಸಾವು ಎಂದು ಮುಚ್ಚಿ ಹಾಕಲಾಗಿತ್ತು.ಇಂತಹ ದುರಂತ ನಡೆದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ವಹಿಸಿಲ್ಲ.
ಅಧಿಕಾರಿಗಳ ಭೇಟಿ
ವಿಷಯ ತಿಳಿದು ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ಮತ್ತು ನಿರ್ದೇಶಕ ಶ್ರೀ ಪತಿ ಚಾಮರಾಜನಗರ ವೃತ್ತ ಸಿ ಎಫ್ ಹೀರಾಲಾಲ್ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಬಂಡೀಪುರದ ಸಿಬ್ಬಂದಿ ಸಹ ಮೂಸು ನಾಯಿ ದ್ರೋಣನೊಂದಿಗೆ ಆಗಮಿಸಿ ಪರಿಶೀಲಿನೆ ನಡೆಸಿದರು ಡಿಸಿಎಫ್ ಶ್ರೀಪತಿ ಮಾತನಾಡಿ ಚಿರತೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಹ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಚಿರತೆಯ ದೇಹದ ಮಾದರಿಗಳನ್ನು ಎಫ್ ಎಸ್ ಎಲ್ ವರದಿಗೆ ಕಳುಹಿಸಿ ವರದಿ ಬಂದ ಬಳಿಕ ಖಚಿತ ಕಾರಣ ಗೊತ್ತಾಗಲಿದೆ ಎಂದರು. ಮರಣೋತ್ತರ ಪರೀಕ್ಷೆ ನಡೆಸಲು ಈಗಾಗಲೇ ಮೂವರು ವೈದ್ಯರನ್ನು ಕರೆಸಲಾಗಿದೆ. ಕರುವಿನ ಮಾಲೀಕ ಯಾರೆಂದು ತಿಳಿದು ಬಂದಿಲ್ಲ.
ಸ್ಥಳೀಯರಾದ ಪ್ರಜ್ವಲ್ ಮಾತನಾಡಿ ಇಲ್ಲಿನಕೆಲವು ಗಣಿಗಳು ನಡೆಯುತ್ತಿವೆ. ಕೆಲವು ನಡೆಯುತ್ತಿಲ್ಲ. ಕಲ್ಲು ಬಂಡೆಯಂತಹ ತ್ಯಾಜ್ಯದ ರಾಶಿ ಚಿರತೆಗಳು ಬಂದು ಆವಾಸ ಸ್ಥಾನ ಮಾಡಿಕೊಳ್ಳಲು ಅನುಕೂಲಕರವಾಗಿದೆ. ಗೋಮಾಳಗಳು ಸಮೀಪದಲ್ಲೇ ಇವೆ. ಹೀಗಾಗಿ ದನ ಕರು ಕುರಿ ಆಡುಗಳ ಓಡಾಟವು ಇದೆ ಎಂದರು.
