
ಹನೂರು :- ತಾಲೂಕಿನ ರಾಮಾಪುರ ಪೊಲೀಸರು ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹನೂರು ತಾಲೂಕಿನ ಬಸಪ್ಪನ ದೊಡ್ಡಿ ಗ್ರಾಮದ ನಿವಾಸಿ ಸಲೀಂ ಎಂಬುವರ ಮನೆಯಲ್ಲಿ ಸರ್ಕಾರದಿಂದ ವಿತರಿಸಲಾಗುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ. ಟಿ. ಕವಿತಾ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಚಿಕ್ಕರಾಜ ಶೆಟ್ಟಿ ಹಾಗೂ ಸಬ್ ಇನ್ಸ್ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ಪೊಲೀಸರ ತಂಡ ಈ ಮನೆ ಮೇಲೆ ದಾಳಿ ನಡೆಸಿತು. ಈ ವೇಳೆ ಮನೆಯಲ್ಲಿ ಯಾರೂ ಲಭ್ಯವಿರಲಿಲ್ಲವಾದರೂ, ಪರಿಶೀಲನೆ ವೇಳೆ 17 ಚೀಲಗಳಲ್ಲಿ ಸಂಗ್ರಹಿತ 643 ಕೆಜಿ ಪಡಿತರ ಅಕ್ಕಿ ಪತ್ತೆಯಾಗಿದೆ. ಈ ಅಕ್ಕಿಯ ಮೌಲ್ಯ ಸುಮಾರು ₹22,505 ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ಪ್ರಭಾರ ಆಹಾರ ನಿರೀಕ್ಷಕ ವಿಷ್ಣುಮೂರ್ತಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ಮನೆ ಮಾಲೀಕ ಸಲೀಂ ವಿರುದ್ಧ ರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತನ ಪತ್ತೆಗೆ ಈಗಾಗಲೇ ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ಬಂಧನವಾಗಲಿದೆ ಎಂದು ಎಸ್‌ಐ ಲೋಕೇಶ್ ಮಾಹಿತಿ ನೀಡಿದ್ದಾರೆ. ಜಿಲ್ಲಾ ಎಸ್‌ಪಿ ಡಾ. ಬಿ. ಟಿ. ಕವಿತಾ ಈ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತಪಡಿಸಿ, ಇತರ ಅಕ್ರಮ ಪಡಿತರ ಚಟುವಟಿಕೆಗಳನ್ನೂ ಪತ್ತೆಹಚ್ಚಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
