
ಹನೂರು :- ತಾಲೂಕಿನ ಸಮೀಪದ ಎಲ್ಲೇಮಾಳ ರಸ್ತೆ ಮಾರ್ಗಮಧ್ಯೆ ಶನಿವಾರ ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಮರವೊಂದಕ್ಕೆ ಕಾರು ಡಿಕ್ಕಿ ಹೊಡೆದು ಚಾಲಕ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಕೆಂಗೇರಿಯ ಚಾಲಕ ಸಿದ್ದರಾಜು (39), ಮೂಗೂರು ಮೋಳೆ ಗ್ರಾಮದ ಚಿಕ್ಕಣ್ಣ (40) ಹಾಗೂ ರೇವಣ್ಣ (50) ಗಾಯಗೊಂಡವರು. ಇವರೆಲ್ಲರೂ ಶುಕ್ರವಾರ ಕಾರಿನಲ್ಲಿ ಮ.ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದು ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಬೆಳಗಿನ ಜಾವ ಊರಿನತ್ತ ತೆರಳುತ್ತಿದ್ದರು. ಈ ವೇಳೆ ಎಲ್ಲೇಮಾಳ – ಹನೂರು ಮಾರ್ಗಮಧ್ಯೆ ಚಾಲಕ ನಿಯಂತ್ರಣ ತಪ್ಪಿದ್ದಾನೆ ಎನ್ನಲಾಗಿದೆ. ಪರಿಣಾಮ ಕಾರು ಹುಣಸೇಮರಕ್ಕೆ ಡಿಕ್ಕಿ ಹೊಡೆದಿದೆ. ಗಾಯಗೊಂಡ ಮೂವರನ್ನು ಸ್ಥಳೀಯರು ತುರ್ತು ವಾಹನದ ಮೂಲಕ ಆಸ್ಪತ್ರೆಗೆ ಕಳುಹಿಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಹನೂರು ಪೊಲೀಸರು ಪರಿಶೀಲಿಸಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.
