
ಹನೂರು :- ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ಧಾಮದ ಅಂಡೇಕುರುಬರದೊಡ್ಡಿ ಗಸ್ತಿನ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಶ್ರೀಗಂಧದ ಮರವನ್ನು ಕತ್ತರಿಸಿದ್ದ ಆರೋಪಿಯೊಬ್ಬನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ. ತಾಲೂಕಿನ ಪಿ.ಜಿ ಪಾಳ್ಯ ಸಮೀಪದ ಅಂಡೇಕುರುಬರ ದೊಡ್ಡಿಯ ಚನ್ನಬಸವಣ್ಣ (45) ಬಂಧಿತ ಆರೋಪಿ. ಇದೇ ಗ್ರಾಮದ ಜಡೇಯಪ್ಪ ಪರಾರಿಯಾದವರು. ಈ ಇಬ್ಬರು ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಶ್ರೀಗಂಧದ ಮರವನ್ನು ಕತ್ತರಿಸಿ ತುಂಡರಿಸುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಸಿಬ್ಬಂದಿ ದಾಳಿ ನಡೆಸಿದಾಗ ಚನ್ನಬಸವಣ್ಣ ಸಿಕ್ಕಿ ಬಿದ್ದರೆ, ಜಡೇಯಪ್ಪ ಪರಾರಿಯಾಗಿದ್ದಾನೆ. ಈ ಬಗ್ಗೆ ಸಿಬ್ಬಂದಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಡಿಸಿಎಫ್ ಭಾಸ್ಕರ್, ಎಸಿಎಫ್ ಶಿವರಾಮು ಅವರ ಮಾರ್ಗದರ್ಶನದಲ್ಲಿ ಆರ್‍ಎಫ್‍ಒ ಪುಟ್ಟರಾಜು ಅವರು ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದು ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು. ಪರಾರಿಯಾಗಿರುವ ಮತ್ತೋರ್ವನ ಬಂಧನಕ್ಕೆ ಇಲಾಖೆಯ ಅಧಿಕಾರಿಗಳು ಬಲೆ ಬೀಸಿದ್ದಾರೆ.
