
ಕೊಳ್ಳೇಗಾಲ :- ಕಬಿನಿ ಹಾಗೂ ಕೆಆರ್ ಎಸ್ ಜಲಾಶಯ ಭಾರಿ ಪ್ರಮಾಣದಲ್ಲಿ ನದಿಗೆ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಮೈದುಂಬಿ ಹರಿದು, ನದಿ ಪಾತ್ರದ ಗ್ರಾಮಗಳ ಜನರಲ್ಲಿ ಆತಂಕ ಸೃಷ್ಟಿ ಮಾಡಿದರೆ, ಗಗನಚುಕ್ಕಿ, ಭರಚುಕ್ಕಿ ಹಾಗೂ ಹೊಗೆನಕಲ್ ಜಲಪಾತಗಳಲ್ಲಿ ರಭಸದಿಂದ ಕಾವೇರಿ ಧುಮಿಕ್ಕಿ ಭೋರ್ಗರೆಯುತ್ತಿದ್ದಾಳೆ. ಹೌದು. ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತದಲ್ಲಿ ಕಾವೇರಿ ಹಾಗೂ ಕಪಿಲೆಯ ಆರ್ಭಟ, ಭೂಮಿಯನ್ನು ಸೀಳಿ ಧುಮ್ಮಿಕ್ಕುವ ಐಸಿರಿ ನಿಜಕ್ಕೂ ವರ್ಣಾತೀತವಾಗಿದೆ. ಕಾವೇರಿ ಹಾಗೂ ಕಬಿನಿ ಜಲಾನಯನ ಪ್ರದೇಶದಲ್ಲಿ ವರುಣನ ಆರ್ಭಟ ಹೆಚ್ಚಾದ ಕಾರಣ ಕಬಿನಿ ಜಲಾಶಯದಿಂದ ಕಪಿಲಾ ನದಿಗೆ ಬಾರಿ ಪ್ರಮಾಣದಲ್ಲಿ ನೀರು ಹರಿಸಿದ ಪರಿಣಾಮ ಕಾವೇರಿ ಸಂಗಮದಲ್ಲಿ ಕಾವೇರಿ – ಕಬಿನಿ ಒಂದಾಗಿ ಸೇರಿ ಹರಿದು ಸಾಗಿ ಜಿಲ್ಲೆಯಲ್ಲಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಇಲ್ಲಿ ಒಂದಲ್ಲ ಎರಡಲ್ಲ, ಲೆಕ್ಕವಿಲ್ಲದಷ್ಟು ಜಲ ಪಾತಗಳು ನಯನ ಮನೋಹರವಾಗಿ ಹರಿದಾಡುತ್ತವೆ. ಒಂದೆಡೆ ವಿಶಾಲವಾಗಿ ಕವಲು ಕವಲಾಗಿ ಶರವೇಗದಲ್ಲಿ ಬಿರುಸು, ಬಿರುಸಾಗಿ ರಭಸದಿಂದ ಧುಮ್ಮಿಕ್ಕುವ ಗಗನಚುಕ್ಕಿ – ಭರಚುಕ್ಕಿ. ಇನ್ನೊಂದೆಡೆ ನೋಟದುದ್ದಕ್ಕೂ ಧುಮ್ಮಿಕ್ಕಿ ಬೋರ್ಗರೆದು ಲೆಕ್ಕವಿಲ್ಲದಷ್ಟು ಕಡೆ ಹರಿಯುತ್ತಿದೆ ಹೊಗೇನಕಲ್ ಫಾಲ್ಸ್. ~ ಭರಚುಕ್ಕಿಯಲ್ಲಿ ಸುಮಾರು ಒಂದು ಕಿಲೋ ಮೀಟರ್ ಅಗಲವಾಗಿ ಮೈದಳೆದಿರುವ ಕಾವೇರಿ ಸುಮಾರು 75 ರಿಂದ 100 ಅಡಿವರೆಗೆ ಧುಮ್ಮಿಕ್ಕುವ ದೃಶ್ಯವಂತು ನಯನ ಮನೋಹರವಾಗಿದೆ. ನಭೋಲೋಕ ಮುಟ್ಟಿದಂತೆ ಭಾಸವಾಗುವ ಭೋರ್ಗರೆತ, ಸುತ್ತಲೂ ಇರುವ ಬೆಟ್ಟಸಾಲು, ಹಸಿರಿನಿಂದ ಕಂಗೊಳಿಸುವ ಅರಣ್ಯ, ಭರಚುಕ್ಕಿ ಜಲಪಾತದ ಸೊಬಗನ್ನು ಮತ್ತಷ್ಟು ಸುಂದರವಾಗಿಸಿದೆ. ಇಲ್ಲಿ ಅಗಲವಾಗಿ ಧುಮ್ಮಿಕ್ಕುವ ಹಾಲ್ಲೊರೆಯಂತಹ ಕಾವೇರಿಯ ವೈಯ್ಯಾರವನ್ನು ಕಣ್ಣುಂಬಿಕೊಳ್ಳುವುದೇ ಒಂದು ಪರಮಾನಂದ. ಕಳೆದ 10ದಿನಗಳಿಂದ ಕೆಆರ್ ಎಸ್ ಜಲಾಶಯದಿಂದ 30ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ಹಾಗೂ ಕಬಿನಿ ಜಲಾಶಯದಿಂದ 30 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡುತ್ತಿರುವುದರಿಂದ ಮೈದುಂಬಿ ಹರಿಯುತ್ತಿರುವ ಕಾವೇರಿಯ ವೈಭವವನ್ನು ಗಗನ ಚುಕ್ಕಿ – ಭರಚುಕ್ಕಿ ಹಾಗೂ ಹೊಗೇನಕಲ್ ಫಾಲ್ಸ್ ಗಳನ್ನು ನೋಡಲು ಇಲ್ಲಿಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಹಾರೆಯಂತಹ ಜಲಧಾರೆಯನ್ನು ಕಣ್ಣಿನಿಂದಲೇ ಆಸ್ವಾಧಿಸುವ, ಕಾವೇರಿಯ ದೃಶ್ಯ ವೈಭವವನ್ನು ಕಣ್ಣುಂಬಿಕೊಂಡು ಹೋಗುವ ಪ್ರವಾಸಿಗರ ಆನಂದಕ್ಕೆ ಇಲ್ಲಿ ಮಿತಿಯೇ ಇಲ್ಲ. ಜಿಲ್ಲಾಡಳಿತದಿಂದ ಕಟ್ಟೆಚ್ಚರ : ಕೊಳ್ಳೇಗಾಲ ತಾಲೂಕಿನ ದಾಸನಪುರ, ಅರಳೆ, ಮುಳ್ಳೂರು, ಯಡಕುರಿಯ, ಧನಗೆರೆ, ಸತ್ತೇಗಾಲ ಸೇರಿದಂತೆ 8 ಗ್ರಾಮಗಳಲ್ಲಿ ಕಾವೇರಿಯಿಂದ ಪ್ರವಾಹ ಉಂಟಾಗಬಹುದಾಗಿದೆ. ಆಯಾ ತಹಸೀಲ್ದಾರರು ಹಾಗೂ ಇತರೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ಗ್ರಾಮಮಟ್ಟದ ವಿಪತ್ತು ನಿರ್ವಹಣಾ ಸಮಿತಿಯನ್ನು ಸಕ್ರಿಯಗೊಳಿಸುವಂತೆ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ನಿರ್ದೇಶನ ನೀಡಿದ್ದಾರೆ.
