
ಹನೂರು :- ಅರಣ್ಯ ಸಮೀಪದಲ್ಲಿ ಹೊಂದಿಕೊಂಡಂತೆ ಇರುವ ಜಮೀನಿನಲ್ಲಿ ಮೇಕೆಗಳನ್ನು ಮೆಯಿಸುತ್ತಿದ್ದ ವ್ಯಕ್ತಿಯ ಮೇಲೆ ಆನೆ ದಾಳಿ ನಡೆಸಿ ಕಾಲು ಮುರಿದಿರುವ ಘಟನೆ ಇಂದು ಮಂಗಳವಾರ ಮಧ್ಯಾಹ್ನ 12 ಸಮಯದಲ್ಲಿ ಸಂಭವಿಸಿದೆ. ತಾಲೂಕಿನ ಕೊಪ್ಪ ಗ್ರಾಮದ ಮಾದೇವ (65) ದಾಳಿಗೊಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ವಿವರ : ಅರಣ್ಯ ಸಮೀಪದ ಜಮೀನಿನಲ್ಲಿ ಕೊಪ್ಪ ಗ್ರಾಮದ ಮಾದೇವ ಎಂಬುವವರು ಇಂದು ಮಧ್ಯಾಹ್ನ 12 ಗಂಟೆಯ ಸಮಯದಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದಾಗ ಏಕಾಏಕಿ ದಾಳಿ ಮಾಡಿದ ಆನೆ ಮಾದೇವ ಎಂಬುವರ ಕಾಲನ್ನು ಮುರಿದು ಸಣ್ಣಪುಟ್ಟ ಗಾಯಗಳಾಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಯ ತಿಳಿಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ನಾವು ಹೊರಗಡೆ ಇದ್ದೇವೆ ನೀವು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ನಂತರ ರೈತರು ಗಾಯಗೊಂಡ ಮಾದೇವ ಅವರನ್ನು ಕೂಡ್ಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ತಮಿಳುನಾಡಿನ ಸಿಂಗರಿಪಾಳ್ಯಕ್ಕೆ ಕರೆದೊಯ್ಯಲಾಗಿದೆ ಎಂದು ಕಿಸಾನ್ ಸಂಘದ ಘಟಕದ ಅಧ್ಯಕ್ಷ ನಾಗರಾಜು ಮಾಹಿತಿ ನೀಡಿದ್ದಾರೆ.
ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ : ಕೊಪ್ಪ ಗ್ರಾಮದ ಪಕ್ಕದ ಅರಣ್ಯದಲ್ಲಿ ಜೂನ್ 27ರಂದು 5 ಹುಲಿಗಳ ಸಾವಿಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಇದ್ದು, ಇದಾದ ಬಳಿಕ ಇಂದು ಜಮೀನಿನ ಪಕ್ಕದಲ್ಲಿ ಆನೆಯು ದನಗಾಹಿಯ ಮೇಲೆ ದಾಳಿ ನಡೆಸಿದ್ದು, ಅರಣ್ಯ ಇಲಾಖೆಯವರು ಸ್ಪಂದಿಸದೆ ಉಡಾಫೆ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
