
ಚಾಮರಾಜನಗರ :- ಉಡ ಹತ್ಯೆ ಮಾಡಿ ಸಾಗಿಸುತ್ತಿದ್ದಾಗ ಇಬ್ಬರನ್ನು ಅರಣ್ಯಾಧಿಕಾರಿಗಳು ಬಂಧಿಸಿದ ಘಟನೆ ಕೊಳ್ಳೇಗಾಲ ತಾಲೂಕಿನ ಅರೇಪಾಳ್ಯ ರಸ್ತೆಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಕಿರುಗಾವಲು ಹೋಬಳಿಯ ರಾಮನಾಥಮೋಳೆ ಗ್ರಾಮದ ರಾಜು, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕಪ್ಪರೆಕೊಪ್ಪಲು ಗ್ರಾಮದ ಸತೀಶ್ ಬಂಧಿತ ಆರೋಪಿಗಳು. ಕೊಳ್ಳೇಗಾಲ ವನ್ಯಜೀವಿ ವಲಯದ ಅರೇಪಾಳ್ಯ ಶಾಖೆಯ ಜಕ್ಕಳ್ಳಿ ಗುಡ್ಡ ಸಮೀಪ ಕಲ್ಲಿನಿಂದ ಒಂದು ಉಡವನ್ನು ಜಜ್ಜಿ ಸಾಯಿಸಿ ಇವರು ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ, ಉಡದ ಮೃತದೇಹವನ್ನು ವಶಕ್ಕೆ ಪಡೆದು ಇವರಿಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
