
ಹನೂರು :- ಅಕ್ರಮವಾಗಿ ಅರಣ್ಯ ಪ್ರದೇಶಕ್ಕೆ ಪ್ರವೇಶಿಸಿ ನಾಡ ಬಂದೂಕಿನಿಂದ ಕಾಡೆಮ್ಮೆಯನ್ನು ಬೇಟೆಯಾಡಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದ್ದು ಇಬ್ಬರು ಪರಾರಿಯಾಗಿರುವ ಘಟನೆ ಮಲೆ ಮಹದೇಶ್ವರ ವನ್ಯಜೀವಿ ವಲಯ ಅರಣ್ಯ ಪ್ರದೇಶದಲ್ಲಿ ನಡೆದಿದೆ.ಕೊಳ್ಳೇಗಾಲ ತಾಲೂಕಿನ ಮೇಗಲದೊಡ್ಡಿ ಪ್ರಕಾಶ್‌ಪಾಳ್ಯ ಗ್ರಾಮದ ಜೋಸೆಫ್ ಬಂಧಿತ ಆರೋಪಿ. ಹನೂರು ತಾಲೂಕಿನ ಕೀರೆಪಾತಿ ಬೋರೆ ಗ್ರಾಮದ ಪೆರಿಯನಾಯಗಂ ಹಾಗೂ ಸಂದನಪಾಳ್ಯ ಗ್ರಾಮದ ಕುಮಾರ್ ಎಂಬುವರಿಬ್ಬರು ಪರಾರಿಯಾಗಿದ್ದಾರೆ. ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ರಾಮಪುರ ಶಾಖೆಯ ಹುಲಿಯಮ್ಮ ಗಸ್ತಿನ ಕುರಿಮಂದೆ ಬಯಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಕಾಡೆಮ್ಮೆಯನ್ನು ನಾಡ ಬಂದೂಂಕಿನಿಂದ ಹತ್ಯೆ ಮಾಡಿ ಮಾಂಸವನ್ನು ತುಂಡು ತುಂಡಾಗಿ ಬೇರ್ಪಡಿಸಿ ಒಣಗಿಸುವುದು ಕಂಡು ಬಂದಿದೆ.ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಡಿ.ಸಿ.ಎಫ್ ಭಾಸ್ಕರ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವೀರಾಜ್ ಶ್ರೀಕಾಂತ್ ಹೊಸೂರ್ ಮಾರ್ಗದರ್ಶನದಲ್ಲಿ ರಾಮಾಪುರ ವನ್ಯಜೀವಿ ವಲಯ ಕೌದಳ್ಳಿ ವಲಯ ಅರಣ್ಯ ಅಧಿಕಾರಿ ಉಮಾಪತಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.ಈವೇಳೆ ಆರೋಪಿಗಳನ್ನು ವಶಕ್ಕೆ ಪಡೆಯಲು ಯತ್ನಿಸಿದಾಗ ಕೀರೆಪಾತಿ ಬೋರೆ ಗ್ರಾಮದ ಪೆರಿಯನಾಯಗಂ ಹಾಗೂ ಸಂದನಪಾಳ್ಯ ಗ್ರಾಮದ ಕುಮಾರ್ ಎಂಬುವವರು ಪರಾರಿಯಾಗಿದ್ದಾರೆ. ಮತ್ತೋರ್ವ ಆರೋಪಿ ಜೋಸೆಫ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ದಾಳಿಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಮಧುಕುಮಾರ್, ಗಸ್ತು ಅರಣ್ಯ ಪಾಲುದಾರ ರಮೇಶ್ ನಾಯಕೋಡಿ, ಅವಿನಾಶ್, ಚಿನ್ನಪ್ಪನ್, ಕೃಷ್ಣಪ್ಪ, ಮಹದೇವಸ್ವಾಮಿ, ಅಣ್ಣಯ್ಯ, ರಂಜಿತ್, ನಾಗ, ಗೋವಿಂದರಾಜು ದಾಳಿಯಲ್ಲಿ ಭಾಗವಹಿಸಿದ್ದರು.
