
ಮಲ್ಲಯ್ಯನಪುರ ಕೋಣನಕೆರೆ ಬಸ್ ನಿಲುಗಡೆಗೆ ಆಗ್ರಹ
ಹನೂರು :- ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಣನ ಕೆರೆ ಗ್ರಾಮದ ಸೋಲಿಗ ಆದಿವಾಸಿ ಸಮುದಾಯದ ಮಹಿಳೆಯರು ಸರ್ಕಾರದ ಉಚಿತ ಬಸ್ ಪ್ರಯಾಣ ಸೌಕರ್ಯದ ಶಕ್ತಿ ಯೋಜನೆಯಿಂದ ವಂಚಿತವಾಗಿದ್ದು ಈ ಸಮಸ್ಯೆಯ ಪರಿಕಾರಕ್ಕೆ ಆಗ್ರಹಿಸಿ ಮಹಿಳೆಯರು ಪ್ರತಿಭಟನೆಗೆ ಮುಂದಾಗಿದ್ದರು.
ಗ್ರಾಮದ ಮೂಲಕ ಸಂಚರಿಸುವ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಮಲೆ ಮಹದೇಶ್ವರ ಬೆಟ್ಟ ಮತ್ತು ಕೌದಳ್ಳಿ ಕಡೆಗೆ ಪ್ರಯಾಣ ಬೆಳೆಸಲು ಹರ ಸಾಹಸ ಪಡಬೇಕಾಗಿದೆ ಎಂದು ಗ್ರಾಮದ ಸೋಲಿಗ ಯುವ ಮುಖಂಡರಾದ ಸಿದ್ದೇಗೌಡ ಮತ್ತು ಶ್ರೀನಿವಾಸ ಅವರು ತಿಳಿಸಿದ್ದಾರೆ.
ಹತ್ತು ಹಲವು ಬಾರಿ ಸಮಸ್ಯೆಯನ್ನು ಸಂಬಂಧಪಟ್ಟವರ ಗಮನಕ್ಕೆ ತಂದರೂ ಸಹ ನಮ್ಮ ಈ ಸಮಸ್ಯೆಯನ್ನು ಬಗೆಹರಿಸಲು ಯಾರು ಮನಸ್ಸು ಮಾಡುತ್ತಿಲ್ಲ ಎಂದು ಆಕ್ರೋಶಗೊಂಡ ಗ್ರಾಮದ ಮಹಿಳೆಯರ ಗುಂಪು ಇಂದು ದಿನಾಂಕ 08-07-2025 ರಂದು ಮಹಿಳಾ ಸಂಘದ ಭದ್ರಮ್ಮ, ಸಿದ್ದಮ್ಮ, ಮೇರಿ, ಗೌರಮ್ಮ, ಮಹದೇವಮ್ಮ ಅವರ ಮುಂದಾಳತ್ವದಲ್ಲಿ ಕೊಳ್ಳೇಗಾಲಕ್ಕೆ ತೆರಳಿ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಘಟಕ ವ್ಯವಸ್ಥಾಪಕರನ್ನು ಭೇಟಿಯಾಗಿ ಸಮಸ್ಯೆಯ ಕುರಿತು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಅಲ್ಲದೆ ಇನ್ನೊಂದು ವಾರದೊಳಗೆ ಈ ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದಲ್ಲಿ ರಸ್ತೆಗೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಗಡುವು ನೀಡಿದ್ದಾರೆ ಎನ್ನಲಾಗಿದೆ.
ಚಾಲಕ /ನಿರ್ವಾಹಕರಿಗೆ ಸೂಚನೆ:- ಮನವಿಯನ್ನು ಸ್ವೀಕರಿಸಿದ ಘಟಕ ವ್ಯವಸ್ಥಾಪಕರು ಮಲೆ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯ ಮಲ್ಲಯ್ಯನ ಪುರ. ಕೋಣನ ಕೆರೆ ಮಾರ್ಗವಾಗಿ ಸಂಚರಿಸುವ ಎಲ್ಲಾ ಸಾರಿಗೆ ಬಸ್ಸುಗಳನ್ನು ಖಡ್ಡಾಯವಾಗಿ ನಿಲುಗಡೆಗೊಳಿಸಲು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
