
ಹನೂರು :- ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗ ಭೂ ಹೀನ ತಳ ಸಮುದಾಯಗಳು ಉಳುಮೆ ಮಾಡುತ್ತಿರುವ ಬಗರ್ ಹುಕಂ ಸಾಗುವಳಿಯನ್ನು ಕಾಲಮಿತಿಯೊಳಗೆ ಇತ್ಯಾರ್ಥಗೊಳಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಸಿದ್ದರಾಜು ದೊಡ್ಡಿಂದುವಾಡಿ ಹೇಳಿದರು.ಪಟ್ಟಣದ ತಾಲೋಕು ಆಡಳಿತ ಕಚೇರಿ ಬಳಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಒತ್ತಾಯಿಸಿ ಶಿರಸ್ತೆದಾರ್ ನಾಗೇಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. ತಾಲೂಕಿನಲ್ಲಿ ಬಗರ್ ಹುಕಂ ಸಾಗುವಳಿ ಮಾಡುತ್ತಿರುವ ದಲಿತರನ್ನು ಅರಣ್ಯ ಭೂಮಿ, ಸಾಮಾಜಿಕ ಅರಣ್ಯ ಕರಣ, ಗೋವುಗಳ ಗೋಮಾಳಗಳಿಗೆ ಕಾಯ್ದಿರಿಸುವ ನೆಪದಲ್ಲಿ ಒಕ್ಕಲಎಬ್ಬಿಸುವುದನ್ನು ಖಂಡಿಸಿ ಹಾಗೂ ದಲಿತರಿಗೆ ಮಂಜೂರಾಗಿರುವ ಭೂಮಿಯನ್ನು ಸರ್ಕಾರಗಳು ಕೈಗಾರಿಕೆಗಳ ಸ್ಥಾಪನೆಗಾಗಿ ವಿದೇಶಿ ಬಂಡವಾಳಗಾರರಿಗೆ ಭೂಮಿ ಕೊಡುತ್ತಿರುವುದರಿಂದ ದಲಿತರನ್ನು ಸಂಪೂರ್ಣವಾಗಿ ಭೂಮಿಯಿಂದ ಹೊರದಬ್ಬುವ ಕುತಂತ್ರವಾಗಿದೆ. ಈ ಬಗ್ಗೆ ಸರ್ಕಾರವನ್ನು ಎಚ್ಚರಿಸಲು ಇಂದು ಪ್ರಥಮ ಹಂತವಾಗಿ ಭೂಮಿ ಮಂಜೂರಾತಿಗಾಗಿ ಆಗ್ರಹಿಸಿ ಪ್ರತಿಭಟನೆ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು. ಹಕ್ಕೋತ್ತಾಯಗಳು : ಬಗರ್ ಹುಕಂ ಸಾಗುವಳಿ ಕಾಲ ಮಿತಿಯೊಳಗೆ ಇತ್ಯರ್ಥಗೊಳಿಸಬೇಕು. ಪರಿಶಿಷ್ಟರ ಪಿ.ಟಿ. ಸಿ.ಎಲ್ ಕಾಯ್ದೆಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯನ್ನು ಮಾನ್ಯ ಮಾಡಬೇಕು. ಸುಳ್ವಾಡಿ ವಿಷ ಪ್ರಸಾದ ದುರಂತದಲ್ಲಿ ಮೃತಪಟ್ಟಿರುವ ಮತ್ತು ಅಶ್ವಸ್ಥರಾಗಿರುವ ಕುಟುಂಬಗಳಿಗೆ ವಸತಿ ಮತ್ತು ಜಮೀನನ್ನು ಶೀಘ್ರವಾಗಿ ಮಂಜೂರು ಮಾಡಬೇಕು ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ವಿದ್ಯಾರ್ಥಿ ನಿಲಯಗಳನ್ನು ಉನ್ನತೀಕರಣ ಗೊಳಿಸಬೇಕೆಂದು,ಹಾಗೂ ಇನ್ನಿತರ ಮನವಿಗಳನ್ನು ಸಲ್ಲಿಸಲಾಯಿತು.ಸುಳ್ವಾಡಿ ಸಂತ್ರಸ್ತರಿಗೆ ನಿವೇಶನ ನೀಡಿ : ಸುಳ್ವಾಡಿ ವಿಷ ಪ್ರಸಾದ ದುರಂತದಲ್ಲಿ ಮಡಿದ ಸಂಬಂಧಿಕರಿಗೆ ನಿವೇಶನ ನೀಡಲು ಮುಂದಾಗಿದ್ದು ಆದಷ್ಟು ಬೇಗ ಅದು ಅರ್ಹ ಫಲಾನುಭವಿಗೆ ತಲುಪಬೇಕು ಎಂದು ಒತ್ತಾಯ ಮಾಡಿದರು. ಇದೆ ಸಂದರ್ಭದಲ್ಲಿ ಬೈರಾನತ್ತ ಮಾದೇಶ್, ಮಾರಿಯಪ್ಪ, ವೇಲುಸ್ವಾಮಿ, ಮುರುಗೇಶ್, ಮುರುಗನ್, ಮಾದೇಶ್, ಶಿವಣ್ಣ, ನಾಗರಾಜು, ಜೈ ಗಣೇಶ್, ವೀರಪ್ಪ, ರಾಮಲಿಂಗಮ್o ಅನೇಕ ಮಹಿಳೆಯರು ಸ್ಥಳದಲ್ಲಿದ್ದರು.
