
ಹನೂರು :- ಬಾಲಕಿ ಅಪಹರಿಸಿ ಕೊಲೆ ಮಾಡಿದ್ದ ಯುವಕನಿಗೆ ಚಾಮರಾಜನಗರ ಅಧಿಕ ಜಿಲ್ಲಾ ಮತ್ತು ಸತ್ರ ಎಫ್ ಟಿಎಸ್ ಸಿ 1 ನ್ಯಾಯಾಲಯವು ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಹನೂರು ತಾಲೂಕಿನ ವಡ್ಡರದೊಡ್ಡಿ ಸಮೀಪದ ಗೋಡೆಸ್ ನಗರದ ನಿವಾಸಿ ತಂಗರಾಜು ಶಿಕ್ಷೆಗೊಳಗಾದ ಅಪರಾಧಿ. ತಂಗರಾಜು ವಿವಾಹಿತನಾಗಿದ್ದು ಪತ್ನಿಯನ್ನು ತೊರೆದಿದ್ದ, ಈತ 2018 ರಲ್ಲಿ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವ ಉದ್ದೇಶದಿಂದ ಅಪಹರಿಸಿಕೊಂಡು ಹೋಗಿ ಬಳಿಕ ರಾಡ್ ನಿಂದ ಹೊಡೆದು ಕೊಲೆ ಮಾಡಿ ಮೃತದೇಹವನ್ನು ಮನೆಯಲ್ಲೇ ಬಿಟ್ಟು ಪರಾರಿಯಾಗಿದ್ದನು.
ಈ ಸಂಬಂಧ ರಾಮಾಪುರ ಠಾಣೆ ಪೊಲೀಸರು ತನಿಖೆ ಕೈಗೊಂಡು ತಂಗರಾಜುವನ್ನು ಬಂಧಿಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸಾಕ್ಷ್ಯಾಧಾರಗಳಿಂದ ಅಪರಾಧ ಸಾಬೀತಾದ ಹಿನ್ನೆಲೆ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಜೆ.ಕೃಷ್ಣ ಅವರು ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿದ್ದಾರೆ.
ದಂಡದ ಹಣವನ್ನು ಮತ್ತು ಕಾನೂನು ಸೇವಾ ಪ್ರಾಧಿಕಾರದಿಂದ 5 ಲಕ್ಷ ಪರಿಹಾರವನ್ನು ಮೃತ ಬಾಲಕಿ ಕುಟುಂಬಕ್ಕೆ ನೀಡಬೇಕೆಂದು ಆದೇಶಿಸಲಾಗಿದೆ. ಸರ್ಕಾರದ ಪರವಾಗಿ- ಆರೋಪಿ ವಿರುದ್ದವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ.ಯೋಗೇಶ್ ವಾದ ಮಂಡಿಸಿದ್ದರು.
