
ಹನೂರು :- ಮಲೆಮಹದೇಶ್ವರ ವನ್ಯಜೀವಿ ಧಾಮ ಕೌದಳ್ಳಿ ಅರಣ್ಯ ವಲಯದ ಕರಿಕಲ್ಲುಗುಡ್ಡೆ ಬಯಲು ಅರಣ್ಯ ಪ್ರದೇಶದಲ್ಲಿ ಉಡ ಬೇಟೆಯಾಡಿದ್ದ ಆರೋಪಿಯೊಬ್ಬನನ್ನು ಶನಿವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದು, ಪರಾರಿಯಾದ ಮತ್ತೋರ್ವನ ಪತ್ತೆಗೆ ಬಲೆ ಬೀಸಿದ್ದಾರೆ. ತಾಲೂಕಿನ ವಡಕೆಹಳ್ಳ ಗ್ರಾಮದ ಚಿನ್ನಮುತ್ತು (60) ಬಂಧಿತ. ಇದೇ ಗ್ರಾಮದ ಕೊಳಂದೈ ಪರಾರಿಯಾದವ.ಈ ಇಬ್ಬರು ಕರಿಕಲ್ಲುಗುಡ್ಡೆ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಉಡ ಭೇಟೆಯಾಡಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಆರ್‍ಎಫ್‍ಒ ಉಮಾಪತಿ ಅವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಬ್ಬಂದಿಯೊಂದಿಗೆ ಮನೆಯ ಮೇಲೆ ದಾಳಿ ನಡೆಸಿದಾಗ ಚಿನ್ನಮುತ್ತು ಸಿಕ್ಕಿಬಿದ್ದರೆ, ಕೊಳಂದೈ ಪರಾರಿಯಾಗಿದ್ದಾನೆ. ಉಡವನ್ನು ವಶಕ್ಕೆ ಪಡೆದ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ. ದಾಳಿಯಲ್ಲಿ ಸಿಬ್ಬಂದಿಗಳಾದ ಆನಂದ ಹಲಸಪ್ಪ ಗೋಳ, ವಿಕ್ರಮ್, ಮಹದೇವಸ್ವಾಮಿ, ಮಲ್ಲಪ್ಪ ಹಾಗೂ ಮಾದೇಶ್ ಭಾಗವಹಿಸಿದ್ದರು.
